ಕೊಂಡಾಪುರ

	ಹೈದರಾಬಾದಿಗೆ ವಾಯುವ್ಯದಲ್ಲಿ 43 ಮೈ. ದೂರದಲ್ಲಿರುವ ಪ್ರಾಕ್ತನ ನೆಲೆ. ಇಲ್ಲಿಯ ಭೂಶೋಧನೆಯಲ್ಲಿ ದೊರಕಿರುವ ಅವಶೇಷಗಳನ್ನು ಸ್ಥಳೀಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಇದು ಆಂಧ್ರ-ಸಾತವಾಹನರ ಕಾಲದಲ್ಲಿ ಅತಿ ಮುಖ್ಯ ಪಟ್ಟಣವಾಗಿದ್ದುದಲ್ಲದೆ ಶಿಲಾಯುಗದ ಸೂಕ್ಷ್ಮ ಶಿಲಾಯುಧಗಳೂ ಹೊಸ ಶಿಲಾಯುಗದ ಕಲ್ಲಿನ ಕೊಡಲಿಗಳೂ ಇಲ್ಲಿ ದೊರಕಿವೆ.

	ಇಟ್ಟಿಗೆಯಿಂದ ಕಟ್ಟಿದ ವಾಸದ ಮನೆಗಳು, ಗಜಪೃಷ್ಠಾಕಾರದ ಚೈತ್ಯಶಾಲೆಗಳು, ವರ್ತುಲಾಕಾರದ ಸ್ತೂಪಗಳೂ-ಇವು ಇಲ್ಲಿ ಕಂಡುಬಂದಿರುವ ಕಟ್ಟಡಗಳಲ್ಲಿ ಮುಖ್ಯವಾದವು. ಮಣ್ಣಿನಿಂದ ಮಾಡಿದ ಜಾಡಿಗಳೂ ಮುಚ್ಚಳಗಳೂ ಧೂಪಾರತಿಗಳೂ ದೊರಕಿವೆ. ಇಲ್ಲಿಯ ಮಣ್ಣಿನ ಪಾತ್ರೆಗಳ ಮೇಲೆ ಬೌದ್ಧ ಸಂಕೇತಗಳಾದ ತ್ರಿರತ್ನ ಮತ್ತು ಧರ್ಮಚಕ್ರಗಳನ್ನು ಕೊರೆಯಲಾಗಿದೆ. ಕೆಲವು ಮಡಕೆಗಳ ಮೇಲೆ ಬ್ರಾಹ್ಮೀ ಲಿಪಿಯ ಬರೆವಣಿಗೆಯೂ ಕಾಣುಬರುತ್ತದೆ. ಮಡಕೆಗಳನ್ನು ಕೆಂಪು ಮತ್ತು ಬಿಳಿಯ ಜೇಡಿಮಣ್ಣಿನಿಂದ ಮಾಡಿ ಅವುಗಳ ಮೇಲೆ ಬಣ್ಣ ಬಳಿದಿದೆ. ಜೇಡಿಮಣ್ಣು, ತಾಮ್ರ, ಮತ್ತು ಶಂಖದಿಂದ ಮಾಡಿದ ಬಳೆಗಳೂ ಸ್ಫಟಿಕ, ನೀಲಿಕಲ್ಲು ಮತ್ತು ಚಿನ್ನದಿಂದ ಮಾಡಿದ ಮಣಿಗಳೂ ಮಣ್ಣಿನಿಂದ ಮಾಡಿದ ಮಾನವ ಬೊಂಬೆಗಳೂ ಇಲ್ಲಿ ಸಿಕ್ಕಿರುವ ಇತರ ಅವಶೇಷಗಳು.

	ಇಲ್ಲಿ 2,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ, ಬೆಳ್ಳಿ, ತಾಮ್ರ ಮತ್ತು ಸೀಸದ ನಾಣ್ಯಗಳು ದೊರೆತಿವೆ. ಅವುಗಳಲ್ಲಿ ರೋಮನ್ ಚಕ್ರವರ್ತಿ ಆಗಸ್ಟಸ್‍ನ ಚಿನ್ನದ ನಾಣ್ಯಗಳೂ ಸಾತವಾಹನ ರಾಜರಾದ ಗೌತಮೀ ಪುತ್ರ, ವಾಸಿಷ್ಠೀಪುತ್ರ, ಶ್ರೀಪುಲಮಾವಿ, ಯಜ್ಞಶ್ರೀ, ಶಾತಕರ್ಣಿ ಇವರ ಬ್ರಾಹ್ಮೀಲಿಪಿಯ ಸೀಸ-ತಾಮ್ರಮಿಶ್ರವಾದ ಲೋಹದ ನಾಣ್ಯಗಳೂ ಮುಖ್ಯವಾದವು.        (ಎ.ಪಿ.ಎನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ